Political

ಕಾರ್ಕಳದಿಂದಲೇ ಸ್ಪರ್ಧೆ: ಚುನಾವಣಾ ಕಹಳೆ ಮೊಳಗಿಸಿದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್

ಉಡುಪಿ: ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಸುದ್ದಿಗೆ ಅಧಿಕೃತ ಮುದ್ರೆ ಕೊಟ್ಟಿರುವ ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ‘ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಕಾರ್ಕಳದಲ್ಲಿ ಇಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಕಾರ್ಕಳ ವಿಧಾನಸಭಾ ಕ್ಷೇತ್ರ ಈ ಬಾರಿ ಸಚಿವ ಸುನಿಲ್ ಕುಮಾರ್ ಹಾಗು ಅವರ ಸಂಘಟನಾ ಜೀವನದ ಗುರು ಪ್ರಮೋದ್ ಮುತಾಲಿಕರ ನಡುವಿನ ಕದನಕ್ಕೆ ಸಾಕ್ಷಿಯಾಗಲಿದೆ.

ತನ್ನ ಸ್ಪರ್ಧೆ ಕುರಿತು ಘೋಷಣೆ ಬಳಿಕ ಮಾತನಾಡಿದ ಮುತಾಲಿಕ್ ಅವರು, “ನಾನು ಬಿಜೆಪಿ, ಬಿಜೆಪಿ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ. ಬಿಜೆಪಿ ಈ ಹಿಂದೆ ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಪ್ರಾಮಾಣಿಕತೆ ಇದ್ದರೆ ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು’ ಎಂದು ಹೇಳಿದ್ದಾರೆ.

ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ . ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ ಧನಿಯಾಗಿ ಈ ಘೋಷಣೆ ಮಾಡುತ್ತಿದ್ದೇನೆ. ಕಾರ್ಕಳದಲ್ಲಿ ಹಿಂದೂಗಳಿಗೆ ನೋವಾಗಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವದ ಪರ ಮತ್ತು ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

Exit mobile version