Sports

ವಿಶ್ವಕಪ್ ಟಿ20: ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯಾ ಫೈನಲಿಗೆ

ದುಬೈ: ದುಬೈ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟಿ20 ಕೂಟದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಆಸ್ಟ್ರೇಲಿಯಾ ಫೈನಲಿಗೆ ಲಗ್ಗೆಯಿಟ್ಟಿದೆ. ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಸೋಲಿಸಿದ ಆಸೀಸ್ ಕೂಟದ ಲೀಗ್ ಹಂತದಲ್ಲಿ ಅಜೇಯ ತಂಡವಾಗಿ ಮೆರೆದಿದ್ದ ಪಾಕ್ ಕನಸನ್ನು ನುಚ್ಚು ನೂರು ಮಾಡಿದೆ.

ಮೊದಲು ಬ್ಯಾಟ್ ಮಾಡಿದ ಪಾಕ್ ತಂಡ 20 ಓವರುಗಳಲ್ಲಿ 176 ರನ್ ಪೇರಿಸಿತು. ಆರಂಭಿಕರಾದ ರಿಜ್ವಾನ್ 67, ನಾಯಕ ಬಾಬರ್ 39 ಹಾಗು ಫಖಾರ್ 55 ರನ್ನುಗಳ ಅಮೂಲ್ಯ ಕೊಡುಗೆ ನೀಡಿದರು. ಸವಾಲಿನ ಮೊತ್ತ ಬೆನ್ನಟ್ಟಿದ ಆಸೀಸ್ ಇನ್ನೂ ಒಂದು ಬಾಕಿ ಇರುವಂತೆಯೇ ೫ ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಆಸೀಸ್ ಆರಂಭವೇನೂ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 1 ರನ್ನು ಆಗುವಷ್ಟರಲ್ಲಿಯೇ ನಾಯಕ ಫಿಂಚ್ ಅವರ ವಿಕೆಟ್ ಕಳೆದುಕೊಂಡ ಆಸೀಸ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಆಸೀಸ್ ಪರ ಡೇವಿಡ್ ವಾರ್ನರ್ 49 ರನ್, ಮಿಚೆಲ್ ಮಾರ್ಷ್ 28 ರನ್ನು ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೂ ಪಂದ್ಯ ಪಾಕ್ ಪಾರವೇ ಇತ್ತು. ಯಾವಾಗ ಮಾರ್ಕಸ್ ಸ್ಟೋಯಿನ್ಸ್ ಹಾಗು ವಿಕೆಟ್ ಕೀಪರ್ ಮ್ಯಾಥ್ಯು ವಾಡೆ ಬ್ಯಾಟ್ ಹಿಡಿದು ಬಂದರೋ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ವಾಡೆ ಅವರಂತೂ ಬಿರುಗಾಳಿಯಂತೆ ಬ್ಯಾಟ್ ಬೀಸಿ ಕೇವಲ 17 ಎಸೆತಗಳಿಂದ 41 ಎನ್ ಗಳಿಸಿ ತಂಡವನ್ನು ಒಂದು ಓವರ್ ಬಾಕಿ ಇರುವಂತೆಯೇ ಫೈನಲಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

Exit mobile version