Sports

ಪ್ಯಾರಾ ಒಲಿಂಪಿಕ್ಸ್: ಅವನಿ ಲೇಖರಗೆ ಅವಳಿ ಪದಕ, ಅರ್ಚರಿಯಲ್ಲಿ ಕಂಚು ಗೆದ್ದ ಹರ್ವಿಂದರ್

ಟೋಕಿಯೋ: ಪ್ಯಾರಾ ಒಲಿಂಪಿಕ್ಸ್ ನಲ್ಲಿ ಇಂದು ಭಾರತ ಐತಿಹಾಸಿಕ ದಾಖಲೆ ನಿರ್ಮಿಸಿದ್ದು ಒಂದೇ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವನಿ ಲೇಖರ ಪಾತ್ರರಾಗಿದ್ದಾರೆ. ಈ ಹಿಂದೆ 10 ಮೀಟರ್ ಶೂಟಿಂಗ್ ನಲ್ಲಿ ಚಿನ್ನ ಗೆದ್ದಿದ್ದ ಅವನಿ ಇಂದು 50 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದರು.

ಆರ್ 8 ಇವೆಂಟ್’ನ ಮಹಿಳೆಯರ 50 ಮೀಟರ್ ರೈಫಲ್ 3 ಪಿ ಎಸ್.ಎಚ್ 1 ಸ್ಪರ್ಧೆಯಲ್ಲಿ ಅವನಿ ಲೇಖರ ಮೂರನೇ ಸ್ಥಾನ ಪಡೆದು ಕಂಚಿಗೆ ಕೊರಳೊಡ್ಡಿದರು. ಅಂತಿಮ ಸುತ್ತಿನ ಆರಂಭದಲ್ಲಿ ಕೇವಲ 149.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದ ಅವನಿ ಉತ್ತಮ ಪ್ರದರ್ಶನ ನೀಡಿ 445.9 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದರು.

ಪ್ಯಾರಾ ಒಲಿಂಪಿಕ್ ನ ಆರ್ಚರಿ ವಿಭಾಗದಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕ ಜಯಿಸಿದ್ದು ಭಾರತದ ಹರ್ವಿಂದರ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಾ ಒಲಿಂಪಿಕ್ ಇತಿಹಾಸದಲ್ಲಿ ಭಾರತಕ್ಕೆ ಅರ್ಚರಿಯಲ್ಲಿ ಪದಕ ದೊರೆಯುವುದು ಇದೇ ಮೊದಲು. ಕಂಚಿನ ಪದಕದ ಪಂದ್ಯದಲ್ಲಿ ಹರ್ವಿಂದರ್ ಸಿಂಗ್ ಅವರು ಕೊರಿಯಾದ ಕಿಮ್ ಮಿನ್ ಸು ಎದುರು 6-5 ಅಂತರದ ಗೆಲುವು ದಾಖಲಿಸಿದರು.

ಇದರೊಂದಿಗೆ ಈ ಬಾರಿಯ ಟೋಕಿಯೋ ಪ್ಯಾರಾ ಒಲಿಂಪಿಕ್ ನಲ್ಲಿ ಭಾರತದ ಪದಕ ಪಟ್ಟಿ 13ಕ್ಕೆ ಏರಿದೆ. ಅದರಲ್ಲಿ 2 ಚಿನ್ನ, 6 ಬೆಳ್ಳಿ ಮತ್ತು 5 ಕಂಚಿನ ಪದಕಗಳು ಸೇರಿವೆ

Exit mobile version