
ಮೆಲ್ಬೋರ್ನ್: ಅಕಾಲಿಕ ಮಳೆಯ ಕಾರಣ ಟಿ20 ವಿಶ್ವಕಪ್ ನ ಇಂದಿನ ಇಂಗ್ಲೆಂಡ್ ಹಾಗು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಐರ್ಲೆಂಡ್ ತಂಡ 5 ರನ್ ಗಳ ಅಂತರದ ದಾಖಲಿಸಿದೆ. ಈ ಮೂಲಕ ಕ್ರಿಕೆಟ್ ಶಿಶು ಕ್ರಿಕೆಟ್ ಜನಕ ರಾಷ್ಟ್ರದ ಮೇಲೆ ಸವಾರಿ ಮಾಡಿ ಅಚ್ಚರಿಗೆ ಕಾರಣವಾಗಿದೆ.
ಈ ಹಿಂದೆ 2011ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಐರ್ಲಾಂಡ್ ತಂಡ ಇಂಗ್ಲೆಂಡ್ ತಂಡವನ್ನು ರೋಚಕವಾಗಿ ಬಗ್ಗು ಬಡಿದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಮತ್ತೆ ಇದು ಮರುಕಳಿಸಿದೆ. ಆದರೆ ಈ ಬಾರಿ ಡಕ್ವಾರ್ಥ್ ಲೂಯಿಸ್ ನಿಯಮದ ಬಲದೊಂದಿಗೆ ಅನ್ನುವುದು ಗಮನಿಸಬೇಕಾದ ಅಂಶ.
ಮೆಲ್ಬೋನ್ರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ನೀಡಿದ 158ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 14.3 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 105ರನ್ ಗಳಿಸಿತ್ತು. ಈ ವೇಳೆ ಅಕಾಲಿಕವಾಗಿ ಮಳೆ ಆರಂಭವಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಈ ಸಂದರ್ಭ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ರನ್ ರೇಟ್ ಆಧಾರದ ಮೇಲೆ ಐರ್ಲೆಂಡ್ ತಂಡವನ್ನು ಐದು ರನ್ ಗಳ ಅಂತರದಲ್ಲಿ ವಿಜಯಿ ಎಂದು ಘೋಷಣೆ ಮಾಡಲಾಯಿತು. ಡಕ್ವರ್ಥ್ ಲೂಯಿಸ್ ನಿಯಮದನ್ವಯ ಇಂಗ್ಲೆಂಡ್ ತಂಡ ಈ ಪಂದ್ಯ ಗೆಲ್ಲಲು 14.3 ಓವರ್ ನಲ್ಲಿ 110 ರನ್ ಗಳಿಸಬೇಕಿತ್ತು.