
ಲೇಖಕರು: ವಿನಾಯಕ ಗಾವಂಕರ
“ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು” ಎಂಬ ಮಾತಿದೆ. ಆದರೆ ಇಲ್ಲಿ ನಾವು ನೋಡ ಹೊರಟಿರುವುದು ಗಂಡ-ಹೆಂಡಿರ ಕಥೆಯಲ್ಲ. ಇದು ಅಮೆರಿಕ ಹಾಗೂ ರಷ್ಯಾ ಎಂಬ ಎರಡು ಮಿಲಿಟರಿ ದೈತ್ಯಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ ‘ಉಕ್ರೇನ್’ ಎಂಬ ರಾಷ್ಟ್ರದ ಕಥೆ. ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಈ ಉಕ್ರೇನ್ ನ ರಾಜಕೀಯ ಹಾಗೂ ಆಂತರಿಕ ವಿದ್ಯಮಾನಗಳನ್ನು ನಿಯಂತ್ರಿಸಲು ಅಮೆರಿಕ ಹಾಗೂ ರಷ್ಯಾಗಳೆರಡೂ ಪ್ರಯತ್ನಪಡುತ್ತಿವೆ.
ಸುಮಾರು ಒಂದು ಲಕ್ಷ ಸಂಖ್ಯೆಯ ರಷ್ಯಾದ ಸೈನಿಕರು ತಮ್ಮ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್ ನ ಗಡಿಭಾಗದಲ್ಲಿ ಬೀಡು ಬಿಡುವ ಮೂಲಕ ಆಕ್ರಮಣದ ಪರೋಕ್ಷ ಸುಳಿವನ್ನು ರಷ್ಯಾ ನೀಡಿದೆ. ಇತ್ತ ಉಕ್ರೇನ್ ನ ಉತ್ತರ ಭಾಗದಿಂದಲೂ ದಾಳಿ ನಡೆಸಲು ಅನುಕೂಲವಾಗುವಂತೆ ತನ್ನ ಮಿತ್ರ ಸರಕಾರವನ್ನು ಹೊಂದಿರುವ ಬೆಲಾರಸ್ ನ್ನು ರಷ್ಯಾದ ಪಡೆಗಳು ಪ್ರವೇಶಿಸಿವೆ. ಉಕ್ರೇನ್ ನಲ್ಲಿ ಅಮೆರಿಕ ಅಥವಾ ನ್ಯಾಟೋ ರಾಷ್ಟ್ರಗಳು ತಮ್ಮ ವಾಯು ದಾಳಿ ವ್ಯವಸ್ಥೆಯನ್ನು ಸ್ಥಾಪಿಸಿದ್ದೇ ಆದಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರವಾಗಿ ಎಚ್ಚರಿದ್ದಾರೆ. ಉಕ್ರೇನ್ ನ್ನು ಆಕ್ರಮಿಸಿದರೆ ಅದಕ್ಕೆ ತಕ್ಕ ಬೆಲೆಯನ್ನು ರಷ್ಯಾದ ಆರ್ಥಿಕತೆ ತೆರಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸುತ್ತಿದೆ. ಇದರ ನಡುವೆ ತನ್ನನ್ನೇ ತಾನು ಸ್ವಂತ ಬಲದಿಂದ ರಕ್ಷಿಸಿಕೊಳ್ಳಲಾಗದೆ ಉಕ್ರೇನ್ ನಿಸ್ಸಹಾಯಕವಾಗಿ, ಅಮೆರಿಕ ಹಾಗೂ ಇತರ ನ್ಯಾಟೋ ರಾಷ್ಟ್ರಗಳ ಕಡೆ ನೋಡುತ್ತಿದೆ.
ಹಾಗೆಂದು ರಷ್ಯಾ ಉಕ್ರೇನ್ ನ ಮೇಲೆ ದಾಳಿ ನಡೆಸಿದರೆ, ಅದು ಇದೇ ಇದೇ ಮೊದಲೆನಿಸಿಕೊಳ್ಳುವುದಿಲ್ಲ. 2014 ರಲ್ಲಿ ರಷ್ಯಾ ಉಕ್ರೇನ್ ನ ಮೇಲೆ ಆಕ್ರಮಣವನ್ನು ಮಾಡಿ ಕ್ರಿಮಿಯಾವನ್ನು ವಶಪಡಿಸಿಕೊಂಡಿತು. ಇದು ಉಕ್ರೇನ್ ನ ಸಾರ್ವಭೌಮತೆಯ ಮೇಲೆ ರಷ್ಯ ನಡೆಸಿದ ಮೊದಲ ಆಕ್ರಮಣವಾಗಿತ್ತು. ಹಾಗೆಂದು ಉಕ್ರೇನ್ ರಷ್ಯದ ಶತ್ರುವೇನೂ ಆಗಿರಲಿಲ್ಲ, 1991 ರಲ್ಲಿ ಸ್ವತಂತ್ರವಾದ ಉಕ್ರೇನ್ 2014 ರವರೆಗೆ ರಷ್ಯದ ಪರ ಧೋರಣೆಯನ್ನು ಹೊಂದಿದ್ದ ಸರಕಾರವನ್ನು ಹೊಂದಿತ್ತು, ಅಲ್ಲಿಯವರೆಗೆ ಉಕ್ರೇನ್ ರಷ್ಯಾಗೆ ಪಥ್ಯವಾಗಿತ್ತು. 2014 ರಲ್ಲಿ ಬಂದ ಸರಕಾರ ಯಾವಾಗ ಅಮೆರಿಕದ ಪರ ಧೋರಣೆಯನ್ನು ತಳೆಯಿತೋ ಆಗ ರಷ್ಯಾ ಕ್ರಿಮಿಯಾವನ್ನು ಆಕ್ರಮಿಸಿತು. ಇದಕ್ಕೆ ಕಾರಣ ಕ್ರಿಮಿಯಾದಲ್ಲಿ ರಷ್ಯಾ ಹೊಂದಿದ್ದ ಮಿಲಿಟರಿ ನೆಲೆಯನ್ನು ಉಳಿಸಿಕೊಳ್ಳುವ ಉದ್ದೇಶ, ಹಾಗೇನಾದರೂ ಕ್ರಿಮಿಯಾದಲ್ಲಿ ರಷ್ಯಾ ತಾನು ಹೊಂದಿದ್ದ ಮಿಲಿಟರಿ ನೆಲೆಯನ್ನು ಕಳೆದುಕೊಂಡರೆ ಕಪ್ಪು ಸಮುದ್ರದಲ್ಲಿ ರಷ್ಯಾ ಹೊಂದಿರುವ ಪಾರುಪತ್ಯಕ್ಕೆ ಧಕ್ಕೆ ಬರುತ್ತಿತ್ತು . ಅಲ್ಲದೆ ಇದೇ ಕಪ್ಪು ಸಮುದ್ರ ಮೆಡಿಟೇರಿಯನ್ ಸಮುದ್ರಕ್ಕೆ ರಷ್ಯಾಗೆ ಬಾಗಿಲಿನಂತೆ ಎಂಬುದನ್ನು ನಾವು ಮರೆಯುವಂತಿಲ್ಲ.
ಇಲ್ಲಿ ಅಮೆರಿಕ ಹಾಗೂ ರಷ್ಯಗಳ ನಡುವಿನ ವೈಮನಸ್ಯಕ್ಕೆ ಉಕ್ರೇನ್ ಬಲಿಯಾಗುತ್ತಿರುವುದು ಮಾತ್ರ ದುರದೃಷ್ಟಕರ. ಅಮೆರಿಕದ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಧೋರಣೆಯೂ ಸಮಸ್ಯೆಯ ಮೂಲಗಳಲ್ಲೊಂದು ಎನ್ನಬಹುದು. ಅದು 1991 ರ ಸಮಯ , ಸೋವಿಯತ್ ಒಕ್ಕೂಟ ವಿಭಜನೆಗೊಂಡು ಅನೇಕ ಸ್ವತಂತ್ರ ರಾಷ್ಟ್ರಗಳು ರೂಪುಗೊಳ್ಳುತ್ತಿದ್ದವು. ಆ ಸಮಯದ ಬೆಳವಣಿಗೆ ರಷ್ಯಾಗೆ ಆತಂಕವನ್ನು ತಂದೊಡ್ಡುತ್ತಿದ್ದಾಗ ಅಮೆರಿಕ ತಾನು ನ್ಯಾಟೋ ಬಣವನ್ನು ರಷ್ಯಾದ ಗಡಿಯ ಕಡೆ ವಿಸ್ತರಿಸುವುದಿಲ್ಲ ಎಂಬ ಭರವಸೆ ನೀಡಿತು. ಆದರೆ ಅಂದು ಕೊಟ್ಟ ಮಾತನ್ನು ಉಳಿಸಿಕೊಳ್ಳದ ಅಮೆರಿಕ ರಷ್ಯಾದ ಗಡಿಭಾಗದ ಅನೇಕ ರಾಷ್ಟ್ರಗಳನ್ನು ನ್ಯಾಟೋ ಬಣಕ್ಕೆ ಸೇರಿಸಿಕೊಂಡಿತು.
ಉದಾ:1999ರಲ್ಲಿ ಹಂಗರಿ ಹಾಗೂ ಜೆಕ್ ಗಣರಾಜ್ಯಗಳು ನ್ಯಾಟೋಗೆ ಸೇರ್ಪಡೆಗೊಂಡವು.
ಈಗ ಉಕ್ರೇನ್ ನ್ಯಾಟೋ ಬಣಕ್ಕೆ ಸೇರುವುದನ್ನು ರಷ್ಯಾ ಪ್ರಬಲವಾಗಿ ವಿರೋಧಿಸುತ್ತಿದೆ, ಅಲ್ಲದೆ ಯಾವುದೇ ಕಾರಣಕ್ಕೂ ನ್ಯಾಟೋ ಬಣ ಪೂರ್ವದೆಡೆಗೆ (ರಷ್ಯಾದ ಕಡೆ) ವಿಸ್ತರಿಸಬಾರದು ಎನ್ನುತ್ತಿದೆ ರಷ್ಯಾ. ಅಲ್ಲದೆ ನ್ಯಾಟೋ ಪಡೆಗಳು ರಷ್ಯದ ಗಡಿಭಾಗಗಳ ದೇಶಗಳಲ್ಲಿ ನಡೆಸುವ ಯುದ್ಧ ಕವಾಯತುಗಳನ್ನು ನಿಲ್ಲಿಸಬೇಕೆಂಬ ಷರತ್ತನ್ನು ರಷ್ಯಾ ಒಡ್ಡಿದೆ. ಆದರೆ ಇದನ್ನು ಒಪ್ಪಲು ಅಮೆರಿಕ ಹಾಗೂ ನ್ಯಾಟೋ ರಾಷ್ಟ್ರಗಳು ಸಿದ್ಧವಿಲ್ಲ.
ಉಕ್ರೇನ್ ನ ಮೇಲೆ ದಾಳಿ ನಡೆಸಿದರೆ ಅತ್ಯಂತ ತೀಕ್ಷ್ಣ ಆರ್ಥಿಕ ನಿರ್ಬಂಧಗಳನ್ನು ರಷ್ಯದ ಮೇಲೆ ಹೇರುವುದಾಗಿ ಅಮೆರಿಕ ಎಚ್ಚರಿಸಿದೆ, ಅಲ್ಲದೆ ಉಕ್ರೇನ್ ಗೆ ಶಸ್ತ್ರಾಸ್ತ್ರಗಳ ನೆರವನ್ನು ನೀಡಲು ಸಿದ್ಧವಾಗಿದೆ. ಈಗಾಗಲೇ ಬ್ರಿಟನ್ ತನ್ನ ಸೈನ್ಯದ ಕೆಲವು ತುಕಡಿಗಳನ್ನು ಉಕ್ರೇನ್ ಗೆ ಕಳಿಸಿಕೊಟ್ಟಿದೆ. ಇದರೊಂದಿಗೆ ರಾಜತಾಂತ್ರಿಕ ಮಾತುಕತೆಗಳೂ ನಡೆಯುತ್ತಿವೆ. ಇತ್ತೀಚಿಗೆ ನಡೆದ ಬಿಡೆನ್- ಪುಟಿನ್ ದೂರವಾಣಿ ಸಂಭಾಷಣೆ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ವಿಫಲವಾಗಿತ್ತು. ಇದಾದ ನಂತರ ಅಮೆರಿಕದ ಮುಖ್ಯ ಕಾರ್ಯದರ್ಶಿಯಾಗಿರುವ ಆಂಟನಿ ಬ್ಲಿಂಕೆನ್ ಉಕ್ರೇನ್ ನ ರಾಜಧಾನಿ ಕೀವ್ ಗೆ ಭೇಟಿ ನೀಡಿದರು, ನಂತರ ಜರ್ಮನಿಗೆ ಭೇಟಿ ನೀಡಿದ ಬ್ಲಿoಕೆನ್ ಉಕ್ರೇನ್ ಕುರಿತ ಫ್ರಾನ್ಸ್ -ಬ್ರಿಟನ್- ಜರ್ಮನಿ- ಅಮೆರಿಕಗಳ (ಚತುಷ್ಪಕ್ಷಿಯ) ಮಾತುಕತೆಯಲ್ಲಿ ಪಾಲ್ಗೊಂಡರು. ಇದಾದ ಬಳಿಕ ಜಿನೇವದಲ್ಲಿ ರಷ್ಯದ ವಿದೇಶಾಂಗ ಸಚಿವ ಸೆರ್ಗಿ ಲ್ಯಾವ್ ರೋವ್ ಅವರೊಂದಿಗೆ ಮಾತುಕತೆಯನ್ನು ನಡೆಸಿದರು. ಈ ಮಾತುಕತೆ ಅಷ್ಟೇನೂ ಫಲಪ್ರದವೆನಿಸದಿದ್ದರೂ, ಬಿಕ್ಕಟ್ಟು ಶಮನವಾಗುವ ಆಶಾಭಾವನ್ನೇನೊ ಮೂಡಿಸಿದೆ. ಇದರ ನಡುವೆ ಅಮೆರಿಕ ಉಕ್ರೇನ್ ನಲ್ಲಿರುವ ತನ್ನ ರಾಯಭಾರ ಕಛೇರಿಯ ಸಿಬ್ಬಂದಿಗಳಿಗೆ ಸ್ವಇಚ್ಛೆಯ ಮೇರೆಗೆ ಉಕ್ರೇನ್ ನ್ನು ತೊರೆಯಬಹುದು ಎಂಬ ಸಲಹೆ ನೀಡಿದೆ. ಇದು ರಷ್ಯಾ ಉಕ್ರೇನ್ ನ ಮೇಲೆ ನಡೆಸಬಹುದಾದ ಆಕ್ರಮಣದ ಮುನ್ನೆಚ್ಚರಿಕೆಯ ನಡೆ ಎನ್ನಬಹುದು.
ಏನೇ ಇರಲಿ ವಿಶ್ವದ ಬಲಾಢ್ಯ ಮಿಲಿಟರಿ ಶಕ್ತಿಗಳ ನಡುವಿನ ಈ ತರಹದ ಹಗ್ಗ-ಜಗ್ಗಾಟವು, ಬಲಹೀನ ರಾಷ್ಟ್ರಗಳ ಅವನತಿಗೆ ಕಾರಣವಾಗುತ್ತದೆ. ರಾಷ್ಟ್ರಗಳು ಬಲಹೀನ ಗೊಳ್ಳುವ ಸಂದರ್ಭ ಬಂದೊದಗಿದಾಗ ಅಮೆರಿಕ ಹಾಗೂ ರಷ್ಯಾದಂತಹ ಬಲಾಢ್ಯ ಮಿಲಿಟರಿಯನ್ನು ಹೊಂದಿರುವ ರಾಷ್ಟ್ರಗಳು ಬಲಹೀನ ರಾಷ್ಟ್ರಗಳನ್ನು ತಮ್ಮ ಕಾರ್ಯಸಾಧನೆಗಾಗಿ ಬಳಸಿಕೊಳ್ಳಲು ಪ್ರಾರಂಭಿಸುತ್ತವೆ. ಇದಕ್ಕೆ ಇನ್ನೊಂದು ಜಲ್ವಂತ ಉದಾಹರಣೆಯಾಗಿ ವೆನಿಜುವೆಲಾ ದೇಶ ನಮ್ಮ ಕಣ್ಣ ಮುಂದಿದೆ, ಅಲ್ಲಿನ ಪ್ರಜೆಗಳ ಪರಿಸ್ಥಿತಿ ನರಕಕ್ಕಿಂತ ಕೆಟ್ಟದಾಗಿದೆ!
ಉಕ್ರೇನ್ ಹಾಗೂ ವೆನಿಜುವೆಲಾ ದೇಶಗಳ ಪರಿಸ್ಥಿತಿ ಇತರ ದೇಶಗಳಿಗೆ ಪಾಠವಾಗಬೇಕು. ವಿದೇಶಿಯರ ಹಸ್ತಕ್ಷೇಪದಿಂದ ಮುಕ್ತವಾದ ದೇಶವನ್ನು ಕಟ್ಟುವುದು ಇಂದು ಪ್ರತಿ ಅಭಿವೃದ್ಧಿಶೀಲ ದೇಶಕ್ಕೂ ಅನಿರ್ವಾಯವಾಗಿದೆ. ಸ್ವಾರ್ಥವನ್ನು ಬದಿಗಿಟ್ಟು, ದೇಶದ ಹಿತಾಸಕ್ತಿಯನ್ನೇ ಮುನ್ನಲೆಯಲ್ಲಿಟ್ಟು ದೇಶವನ್ನು ಕಟ್ಟಿದಾಗ ಮಾತ್ರ ಒಂದು ಸುಭದ್ರ ದೇಶವನ್ನು ಕಟ್ಟುವುದು ಸಾಧ್ಯ. ಇಲ್ಲದೇ ಹೋದಲ್ಲಿ ಉಕ್ರೇನ್ ಹಾಗೂ ವೆನಿಜುವೆಲಾ ದೇಶಗಳು ಎದುರಿಸುತ್ತಿರುವ ಪರಿಸ್ಥಿತಿಯನ್ನು ಅನೇಕ ದೇಶಗಳು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿ ಬಂದರೂ ಅಚ್ಚರಿಯಿಲ್ಲ.