
ಉಡುಪಿ: ಸರಕಾರೀ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಈ ಹಿಂದೆ ಅನುಸರಿಸ್ಕೊಂಡು ಬಂದಂತೆಯೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆಯೇ ಹಾಜರಾಗಬೇಕು. ಒಂದು ವೇಳೆ ಪ್ರತಿಭಟನಾನಿರತ ೬ ಮಂದಿ ವಿದ್ಯಾರ್ಥಿನಿಯರು ಅದಕ್ಕೆ ಒಪ್ಪದೇ ಇದ್ದಲ್ಲಿ ಅವರುಗಳಿಗೆ ಪ್ರತ್ಯೇಕ ಆನ್ಲೈನ್ ತರಗತಿ ಆರಂಭಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಶಾಲಾ ಸಮಿತಿ ಅಧ್ಯಕ್ಷ, ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
“ಯಾರದೋ ಕುಮ್ಮಕ್ಕಿಗೆ ಒಳಗಾಗಿ ವಿದ್ಯಾರ್ಥಿಗಳ ಹಾಗು ಕಾಲೇಜಿನ ಭವಿಷ್ಯ ಹಾಳಾಗಬಾರದು. ವಿದ್ಯಾರ್ಥಿನಿಯರಿಯು ಹಿಜಾಬ್ ಧರಿಸದೆಯೇ ಬರಬೇಕು. ಇಲ್ಲದಿದ್ದರೆ ಕಾಲೇಜಿಗೆ ಪ್ರವೇಶವಿಲ್ಲ. ಅವರುಗಳು ಆನ್ಲೈನ್ ತರಗತಿಗೆ ಹಾಜರಾಗಬಹುದು ಮತ್ತು ಪರೀಕ್ಷೆಗೂ ಕೂರಬಹುದು” ಎಂದು ರಘುಪತಿ ಭಟ್ ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.
ಒಂದು ಕಾಲೇಜಿನಲ್ಲಿ ಹಿಜಾಬ್ ಗೆ ಅನುಮತಿ ನೀಡಿದರೆ ಉಳಿದೆಲ್ಲ ಕಾಲೇಜುಗಳಲ್ಲಿ ಇದು ಮುಂದುವರೆಯುತ್ತದೆ. ಅದನ್ನು ನೋಡಿ ಉಳಿದವರು ಕೇಸರಿ ಶಾಲು ಹಾಗು ಇತರೆ ಧರ್ಮದ ಪೋಷಾಕುಗಳನ್ನು ಧರಿಸಿ ಬರಲು ಆರಂಭಿಸುತ್ತಾರೆ. ಇದರಿಂದ ಶಿಕ್ಷಣ ಕೇಂದ್ರಗಳಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುತ್ತದೆ. ಹಿಜಾಬ್ ವಿಷಯವನ್ನು ದೊಡ್ಡದು ಮಾಡಬಾರದು ಎಂದು ಮುಸ್ಲಿಂ ಮುಖಂಡರುಗಳಿಗೆ ತಿಳಿ ಹೇಳಲಾಗಿದೆ ಎಂದು ಶಾಸಕರು ಹೇಳಿದರು.