
ಮಂಗಳೂರು: ಪ್ರಸ್ತುತ ಸುದ್ದಿಯಲ್ಲಿರುವ ಉಡುಪಿ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿ, ಕಾಲೇಜಿನ ನಿಯಮವನ್ನು ಗಾಳಿಗೆ ತೂರಿದ ಪ್ರತಿಭಟನಾ ನಿರತ ೬ ಮಂದಿ ಮುಸ್ಲಿಂ ವಿದ್ಯಾರ್ಥಿನಿಯರ ನಡೆ ಬಗ್ಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಹಾಗು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ರಹೀಮ್ ಉಚ್ಚಿಲ್ ಅವರಿಗೆ ಈಗ ಸಾಲು ಸಾಲು ಬೆದರಿಕೆ ಕರೆಗಳು ಬರತೊಡಗಿವೆ.
ವಿದೇಶಗಳಿಂದ ಹಾಗು ಕೆಲವು ಇಂಟರ್ನೆಟ್ ಕರೆಗಳ ಮೂಲಕ ಬೆದರಿಕೆಗಳು ಬರುತ್ತಿದ್ದು, ರಹೀಮ್ ಉಚ್ಚಿಲ್ ಅವರು ಮಂಗಳೂರು ದಕ್ಷಿಣ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಫೋನ್ ಕರೆಗಳ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ.
ಹಿಜಾಬ್ ವಿವಾದಕ್ಕೆ ಸಮ್ಮತಿಸಲಿಲ್ಲ ಎಂಬ ಕಾರಣಕ್ಕೆ ಕಿಡಿಗೇಡಿಗಳು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದು ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ರಹೀಮ್ ಉಚ್ಚಿಲ್ ಅವರು ಪ್ರತಿಕ್ರಿಯಿಸಿದ್ದಾರೆ.