
ಮಂಗಳೂರು: ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಗರದ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಶನಿವಾರ ಆರಂಭವಾದ 7ನೇ ವರ್ಷದ ಮಂಗಳೂರು ಕಂಬಳ ಇಂದು ಸಂಪನ್ನಗೊಂಡಿದೆ. ನಗರ ಪ್ರದೇಶದ ಜನರಿಗೆ ಹಳ್ಳಿ ಸೊಗಡಿನ ಕಂಬಳವನ್ನು ಪರಿಚಯಿಸುವ ಉದ್ದೇಶ ಹಾಗು ಕಂಬಳವನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಚಿಂತನೆಯೊಂದಿಗೆ 7 ವರ್ಷದ ಹಿಂದೆ ಆರಂಭವಾದ ರಾಮ ಲಕ್ಷ್ಮಣ ಜೋಡುಕೆರೆ ಮಂಗಳೂರು ಕಂಬಳ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತಾ ಜನಾಕರ್ಷಣೆಯ ಉತ್ಸವವಾಗುತ್ತಿದೆ. ಅದರಲ್ಲೂ ಮಂಗಳೂರಿನ ಯುವ ಸಮುದಾಯದಲ್ಲಿ ಒಂದು ಸಾಂಸ್ಕೃತಿಕ ಕ್ರೇಜ್ ಅನ್ನು ಸೃಷ್ಟಿಸಿದೆ.
ಈ ಬಾರಿಯ ಮಂಗಳೂರು ಕಂಬಳದಲ್ಲಿ ಒಟ್ಟು 170 ಜೊತೆ ಕಂಬಳದ ಕೋಣಗಳು ಒಟ್ಟು 6 ಸ್ಪರ್ಧಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದವು. ಕನಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ಅಡ್ಡ ಹಲಗೆ, ನೇಗಿಲು ಹಿರಿಯ ಹಾಗು ನೇಗಿಲು ಕಿರಿಯ ಸೇರಿ ಒಟ್ಟು 6 ವಿಭಾಗಗಳಲ್ಲಿ ವಿಜೇತರಾದವರ ವಿವರ ಈ ರೀತಿ ಇದೆ.
ಕನಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ ಪೂಜಾರಿ ಅವರ ಮಾಲಕತ್ವದ (ಓಡಿಸಿದವರು: ಬೈಂದೂರು ಮಹೇಶ್) ಕೋಣಗಳು ಪ್ರಥಮ ಸ್ಥಾನ ಪಡೆದರೆ, ಕಾಂತಾವರ ಬೇಲಾಡಿ ಅಶೋಕ್ ಶೆಟ್ಟಿ (ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ) ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಎರಡು ಜತೆ ಕೋಣಗಳು ಪ್ರಥಮ ಹಾಗು ದ್ವಿತೀಯ ಎರಡೂ ಸ್ಥಾನಗಳನ್ನು ಬಾಚಿಕೊಂಡಿವೆ. ಪ್ರಥಮ ಸ್ಥಾನೀಯ ಕೋಣಗಳನ್ನು ಓಡಿಸಿದವರು ವಂದಿತ್ ಶೆಟ್ಟಿ, ದ್ವಿತೀಯ ಸ್ಥಾನಿ ಕೋಣಗಳನ್ನು ಕಾವೂರು ದೋಟ ಸುದರ್ಶನ್ ಅವರು ಓಡಿಸಿದ್ದಾರೆ.
ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ಅವರ ಕೋಣಗಳು (ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್) ಪ್ರಥಮ ಸ್ಥಾನ ಗೆದ್ದುಕೊಂಡರೆ, ದ್ವಿತೀಯ ಸ್ಥಾನವನ್ನು ಸಾಲಿಗ್ರಾಮ ಕಾರ್ಕಡ ಪುಟ್ಟು ಹೊಳ್ಳರ ಮನೆ ನಟರಾಜ್ ಹೊಳ್ಳ ಮಾಲಕತ್ವದ (ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್) ಕೋಣಗಳು ಪಡೆದುಕೊಂಡವು.
ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಕೋಣಗಳು (ಓಡಿಸಿದವರು ಬೈಂದೂರು ವಿಶ್ವನಾಥ್ ದೇವಾಡಿಗ), ಹಾಗು ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಓಡಿಸಿದವರು ಬೈಂದೂರು ಮಂಜುನಾಥ ಗೌಡ) ಕೋಣಗಳು ಕ್ರಮವಾಗಿ ಪ್ರಥಮ ಹಾಗು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.
ಅಡ್ಡ ಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ ಪೂಜಾರಿ ಮಾಲಕತ್ವದ ಕೋಣಗಳು (ಓಡಿಸಿದವರು ಗಂಗಯ್ಯ ಪೂಜಾರಿ) ಹಾಗು ಮಂಗಳೂರು ಕಮಲಾಭಿಮಾನಿ ವಕೀಲ ವೃಂದ ಮಾಲಕತ್ವದ ಕೋಣಗಳು (ಓಡಿಸಿದವರು ಭಟ್ಕಳ ಹರೀಶ್) ಕ್ರಮವಾಗಿ ಪ್ರಥಮ ದ್ವಿತೀಯ ಸ್ಥಾನಗಳನ್ನು ಅಲಂಕರಿಸಿವೆ.
ನೇಗಿಲು ಕಿರಿಯ ವಿಭಾಗದಲ್ಲಿ ಒಟ್ಟು 81 ಜತೆ ಕೋಣಗಳು ಭಾಗವಹಿಸಿದ್ದು ಮೂಡುಬೆಳ್ಳೆ ಜವನೆರ್ ಮಾಲಕತ್ವದ (ಓಡಿಸಿದವರು ಹಿರೇಬೆಟ್ಟು ಪ್ರದೀಪ್ ಪೂಜಾರಿ) ಕೋಣಗಳು ಪ್ರಥಮ ಸ್ಥಾನವನ್ನು ಗೆದ್ದುಕೊಂಡರೆ, ದ್ವಿತೀಯ ಸ್ಥಾನ ಕಟೀಲು ಕಿನ್ನಿಗೋಳಿ ಪ್ರಖ್ಯಾತ್ ಪ್ರಣೀತ್ ಶೆಟ್ಟಿ ಮಾಲಕತ್ವದ (ಓಡಿಸಿದವರು ಮಾಸ್ತಿಕಟ್ಟೆ ಸ್ವರೂಪ್) ಕೋಣಗಳ ಪಾಲಾಯಿತು.