National

ಪ್ರಧಾನಿ ಮೋದಿ ‘ಅದಾನಿ’ ಪರ ಲಾಬಿ ಮಾಡಿದ್ದಾರೆಂದು ಆರೋಪಿಸಿದ್ದ ಶ್ರೀಲಂಕಾ ಉನ್ನತ ಅಧಿಕಾರಿ ದಿಢೀರ್ ರಾಜೀನಾಮೆ

ಕೋಲಂಬೋ: ಶ್ರೀಲಂಕಾದ ಪವನ ವಿದ್ಯುತ್ ಯೋಜನೆಯನ್ನು ಭಾರತೀಯ ಅದಾನಿ ಗ್ರೂಪ್‌ಗೆ ಮಂಜೂರು ಮಾಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್(ಸಿಇಬಿ) ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಪ್ರಧಾನಿ ಮೋದಿ ಮೇಲೆ ಲಂಕಾ ಸರ್ಕಾರದ ಮೇಲೆ ಲಾಬಿ ಮಾಡಿದ ಆರೋಪ ಹೊರಿಸಿದ ಕೆಲವೇ ದಿನಗಳಲ್ಲಿ ಎಂಎಂಸಿ ಫರ್ಡಿನಾಂಡೋ ನೀಡಿದಂತಾಗಿದೆ. ಅವರ ಈ ಆರೋಪ ಲಂಕಾದಲ್ಲಿ ರಾಜಕೀಯ ವಿವಾದವನ್ನು ಸೃಷ್ಟಿಸಿತ್ತು. ಮತ್ತು ಹೇಳಿಕೆಯನ್ನು ವಾಪಸು ಪಡೆಯುವಂತೆ ಅವರ ಮೇಲೆ ಎಲ್ಲ ಕಡೆಗಳಿಂದ ಒತ್ತಡ ಬರಲಾರಂಭಿಸಿದ್ದವು. ಕೊನೆಗೆ ದಿಢೀರ್ ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ.

ಶ್ರೀಲಂಕಾದ ಸಾರ್ವಜನಿಕ ಉದ್ಯಮಗಳ ಸಂಸತ್ತಿನ ಕಾವಲು ಸಮಿತಿ ಅಧಿವೇಶನದಲ್ಲಿ ಫರ್ಡಿನಾಂಡೋ ಅವರು “ಭಾರತ ಪ್ರಧಾನಿ ನರೇಂದ್ರ ಮೋದಿ ಒತ್ತಡದಿಂದಾಗಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಅದಾನಿ ಗ್ರೂಪ್‌ಗೆ 500 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಯೋಜನೆಯನ್ನು ನೀಡುವಂತೆ ಕೇಳಿಕೊಂಡರು” ಎಂದು ಹೇಳಿದ್ದರು.

“ನವೆಂಬರ್ 24 ರಂದು, ಅಧ್ಯಕ್ಷರು (ಲಂಕಾ ಅಧ್ಯಕ್ಷ) ಸಭೆಯ ನಂತರ ನನ್ನನ್ನು ಕರೆದರು ಮತ್ತು ಯೋಜನೆಯನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವಂತೆ ಭಾರತದ ಪ್ರಧಾನಿ ಮೋದಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು. ಈ ವಿಷಯವು ನನಗೆ ಅಥವಾ ಸಿಲೋನ್ ವಿದ್ಯುತ್ ಮಂಡಳಿಗೆ ಸಂಬಂಧಿಸಿಲ್ಲ ಎಂದು ನಾನು ಹೇಳಿದೆ. ನಾನು ಅದನ್ನು ಪರಿಶೀಲಿಸಬೇಕೆಂದು ಅಧ್ಯಕ್ಷರು ಒತ್ತಾಯಿಸಿದರು. ನಂತರ ನಾನು ಅಧ್ಯಕ್ಷರು ಸೂಚನೆ ನೀಡಿದಂತೆ ಹಣಕಾಸು ಕಾರ್ಯದರ್ಶಿ ಅವರಿಗೆ ‘ಪರವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ’ ಪತ್ರವನ್ನು ಕಳುಹಿಸಿದ್ದೇನೆ. ಇದು ಸರ್ಕಾರದಿಂದ ಸರ್ಕಾರದ ಒಪ್ಪಂದವಾಗಿದೆ ಎಂದು ನಾನು ಸೂಚಿಸಿದೆ” ಎಂದು ಫರ್ಡಿನಂಡೊ ಮೂರು ದಿನಗಳ ಹಿಂದೆ ಹೇಳಿದ್ದರು.

ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಾನಿ ಗ್ರೂಪ್ ವಕ್ತಾರರು, “ಶ್ರೀಲಂಕಾದಲ್ಲಿ ಹೂಡಿಕೆ ಮಾಡುವ ನಮ್ಮ ಉದ್ದೇಶವು ಮೌಲ್ಯಯುತ ನೆರೆಹೊರೆಯವರ ಅಗತ್ಯತೆಗಳನ್ನು ಪರಿಹರಿಸುವುದಾಗಿದೆ. ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆ ಆಗಿ, ನಮ್ಮ ಎರಡು ರಾಷ್ಟ್ರಗಳು ಯಾವಾಗಲೂ ಹಂಚಿಕೊಂಡಿರುವ ಪಾಲುದಾರಿಕೆಯ ಅಗತ್ಯ ಭಾಗವಾಗಿ ನಾವು ಇದನ್ನು ನೋಡುತ್ತೇವೆ. ನಿರಾಧಾರ ಆರೋಪದ ಬಗ್ಗೆ ನಾವು ನಿರಾಶೆಗೊಂಡಿದ್ದೇವೆ.”ಎಂದು ಹೇಳಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version