
ಉಡುಪಿ: ಶಿವಮೊಗ್ಗದ ಹರ್ಷ ಅವರ ಕೊಲೆಯ ಹಿಂದಿನ ಷಡ್ಯಂತ್ರ ಬೆಳಕಿಗೆ ಬರಬೇಕು. ಈ ಸಮಾಜಘಾತುಕ ಕೃತ್ಯದ ಹಿಂದಿನ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಕೇಸನ್ನು ತಕ್ಷಣದಲ್ಲೇ NIA ಗೆ ಹಸ್ತಾಂತರಿಸುವಂತೆ ಆಗ್ರಹಿಸುತ್ತೇನೆ ಎಂದು ಕೇಂದ್ರ ಕೃಷಿ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದ್ದಾರೆ.
“ಈ ರೀತಿ ಹಲವು ಹಿಂದೂ ಯುವ ಕಾರ್ಯಕರ್ತರ ಕೊಲೆಗಳಾಗಿದ್ದು, ಈ ಹಿಂದೆ ಬೆಂಗಳೂರಿನ ಹಿಂದೂ ಮುಖಂಡ ರುದ್ರೇಶ್ ಕೊಲೆಯಲ್ಲಿ ಪಾಪುಲರ್ ಫ್ರಾಂಟ್ ಆಫ್ ಇಂಡಿಯಾ ಹಾಗೂ ಎಸ್ಡಿಪಿಐ ಸಂಘಟನೆ ಇತ್ತು ಎಂಬುದು ಸಾಬೀತಾಗಿದೆ. ಇದೇ ರೀತಿಯ ಷಡ್ಯಂತ್ರ ಹರ್ಷ ಕೊಲೆ ಪ್ರಕರಣದಲ್ಲೂ ಇದೆ. ಈ ಷಡ್ಯಂತ್ರವನ್ನು ಬಯಲು ಮಾಡಬೇಕು ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ದೊರಕುವಂತಾಗಬೇಕು. ಈ ಕಾರಣಕ್ಕೆ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಕೊಡಬೇಕು ಎಂದು ಆಗ್ರಹ ಮಾಡಿ ಮುಖ್ಯಮಂತ್ರಿಗಳಿಗೆ ನಾನು ಪತ್ರ ಬರೆದಿದ್ದೇನೆ. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರದ ಮುಖೇನ ವಿವರ ನೀಡುವ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರ ಕೂಡಲೇ ಹರ್ಷ ಅವರ ಕುಟುಂಬಕ್ಕೆ ಹಣಕಾಸಿನ ನೆರವು ನೀಡಬೇಕು ಎಂದು ಉತ್ತರ ಪ್ರದೇಶ ಚುನಾವಣಾ ಕೆಲಸದಲ್ಲಿರುವ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರಕಾರವನ್ನು ಆಗ್ರಹಿಸಿದರು.